ಟೆಂಪರ್ ಫ್ಯಾಮಿಲಿ ಎಂಟರ್ ಟೈನರ್ ಪ್ಯಾಕೇಜ್ 3.5/5 ****
Posted date: 18 Sun, Dec 2022 � 12:04:20 AM
ನಿರ್ದೇಶನ : ಮಂಜು ಕವಿ
ನಿರ್ಮಾಪಕ : ವಿನೋದ್ ಕುಮಾರ್, ಮೋಹನ್ ಬಾಬು
ಛಾಯಾಗ್ರಹಣ : ಶಿವಕುಮಾರ್.ಆರ್.ಕೆ 
ಸಂಗೀತ : ಹರಿಬಾಬು
ತಾರಾಗಣ : ಆರ್ಯನ್ ಸೂರ್ಯ, ಕಾಶಿಮಾ ರಫಿ, ಧನು ಯಲಗಚ್, ಮಜಾ ಟಾಕೀಸ್ ಪವನ್, ಬಲ ರಾಜ್ ವಾಡಿ, ಯತಿರಾಜ್, ತಬಲಾ ನಾಣಿ, ಸುಧಾ ಬೆಳವಾಡಿ ಮಾಸ್ಟರ್ ಪವನ್ ಹಾಗೂ ಮುಂತಾದವರು...

ಟೆಂಪರ್  ಅಂದರೆ ಸಣ್ಣ ವಿಷಯಕ್ಕೂ ಕೋಪ ಮಾಡಿಕೊಳ್ಳುವ ಗುಣ ಎಂದು ವ್ಯಾಖ್ಯಾನಿಸಬಹುದು. ಒಂದು  ಜಾಗದಲ್ಲಿ  ಮೋಸ, ಅನ್ಯಾಯ ನಡೆದಾಗ ಅದನ್ನು ಧೈರ್ಯದಿಂದ ಎದುರಿಸಿ, ಆ ತಪ್ಪನ್ನು  ಖಂಡಿಸಿ ಮುಂದೆ ಸಾಗುವ ನಾಯಕ ಸೂರ್ಯ, ತನ್ನ ಕುಟುಂಬದೊಂದಿಗೆ,  ತನ್ನ ಗ್ಯಾರೇಜ್ ಗೆಳೆಯರ ಜೊತೆ  ಸಂತಸದಿಂದಿರುತ್ತಾನೆ.
 
ಶಾಲಾ ದಿನಗಳಿಂದಲೂ ಎಲ್ಲೇ  ತಪ್ಪು ನಡೆದರೂ ಅದರ  ವಿರುದ್ದ  ನಿಲ್ಲುವ ಗುಣ ಬೆಳೆಸಿಕೊಂಡಿರುತ್ತಾನೆ. ಆತ ಮನೆಯಲ್ಲಿ  ಮುದ್ದಿನ ಮಗನಾಗಿದ್ದರು, ಹೊರಗಡೆ ಪುಂಡರ  ಅಟ್ಟಹಾಸಕ್ಕೆ ಉತ್ತರವಾಗಿ ಕೈಗೆ ಸಿಕ್ಕ ಬಾಟಲಿಯಿಂದ ಅವರ ತಲೆಗೆ ಹೊಡೆದು ತಾನು ಮಾಡಿದ್ದೇ ಸರಿ ಎಂದು ವಾದಿಸುತ್ತಾನೆ. ಮುಂದೆ ಬೆಳೆದು ದೊಡ್ಡವನಾದರೂ ತನ್ನದೇ ಆದ ಗತ್ತು ಗಮ್ಮತ್ತಿನಿಂದ ನಡೆಯುವ ಸೂರ್ಯ (ಆರ್ಯನ್ ಸೂರ್ಯ) ತನ್ನ ಗ್ಯಾರೇಜ್ ನಲ್ಲಿ ಗೆಳೆಯರ (ಪವನ್ ಹಾಗೂ ಧನು) ಜೊತೆ ಕೆಲಸ ಮಾಡಿಕೊಂಡು ತಂದೆ ತಾಯಿಯ ಪ್ರೀತಿ ವಿಶ್ವಾಸದೊಂದಿಗೆ ತನ್ನ ತಂಗಿಯ  ಮುದ್ದಿನ ಅಣ್ಣನಾಗಿ ಜೀವನ ನಡೆಸುತ್ತಾನೆ. ಒಮ್ಮೆ ಕಾರಲ್ಲಿ ಹೋಗುತ್ತಿದ್ದ ಸೂರ್ಯ,  ನಾಯಕಿ ಗೀತಾಳ (ಕಾಶಿಮಾ ರಫಿ) ಸ್ಕೂಟರಿಗೆ ಗುದ್ದುವ  ಮೂಲಕ  ಇಬ್ಬರ ನಡುವೆ ಪರಿಚಯವಾಗುತ್ತದೆ. ಅದು ಪ್ರೀತಿಗೆ ಟರ್ನ್ ಆಗುತ್ತದೆ.  ಜನರಿಗೆ ಸದಾ  ಸ್ಪಂದಿಸುವ ಗೌಡ (ಬಲ ರಾಜ್ ವಾಡಿ) ಜನರ ವಿಶ್ವಾಸ ಗಳಿಸಿರುತ್ತಾನೆ. ಆದರೆ  ಅವನ ತಮ್ಮ (ಯತಿರಾಜ್) ಕೆಲಸಕ್ಕೆ ಬರೋ ಹೆಣ್ಣು ಮಕ್ಕಳನ್ನು ಬಲತ್ಕರಿಸಿ ಆಸೆ ಈಡೇರಿಸಿಕೊಳ್ಳುತ್ತಾನೆ. ಮತ್ತೊಂದೆಡೆ ಸೂರ್ಯನ ಸ್ನೇಹ ವ್ಯಕ್ತಿತ್ವಕ್ಕೆ ಮನಸೋತ  ಗೀತಾ ಅವನನ್ನ ಪ್ರೀತಿಸಲು ಮುಂದಾಗುತ್ತಾಳೆ. ಇದರ ನಡುವೆ ಸೂರ್ಯನ ತಂಗಿಯ ಗೆಳತಿಯು ತನ್ನ ಪ್ರಾಣ ಕಳೆದುಕೊಳ್ಳುತ್ತಾಳೆ.
 
ಇದು ಇಡೀ ಊರಿಗೆ  ದೊಡ್ಡ ಪ್ರಶ್ನೆಯಾಗಿ ಉಳಿಯುತ್ತದೆ. ಇದೇ ಸಮಯಕ್ಕೆ ಗೌಡನ ತಮ್ಮ ಇದು  ಸೂರ್ಯನ ಕೈವಾಡ,  ತಂಗಿ ಎನ್ನುತ್ತಾ ಅವಳ ಬದುಕು ಹಾಳುಮಾಡಿದ ಎನ್ನುತ್ತಾನೆ. ಅದೇ ಸಮಯಕ್ಕೆ ಬರುವ ಪೊಲೀಸ್ ಸೂರ್ಯನನ್ನ  ಅರೆಸ್ಟ್  ಮಾಡುತ್ತಾರೆ. ಇಲ್ಲಿಂದ ಚಿತ್ರದ ಓಟ ಮತ್ತೊಂದು ತಿರುವನ್ನು ಪಡೆಯುತ್ತದೆ. ಮುಂದೆ ನಡೆಯುವ ಕಥೆ ಬಲು ರೋಚಕವಾಗಿದೆ. ಆ ಹುಡುಗಿ ಸಾಯಲು ಕಾರಣವೇನು...  ಸೂರ್ಯನ ಮೇಲೆ ಬಂದ ಅಪವಾದ ಏನಾಯ್ತು... ನಾಯಕಿಯ ಬದುಕು ಏನಾಯಿತು... ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಬೇಕೆಂದರೆ  ನೀವೊಮ್ಮೆ  ಟೆಂಪರ್ ಚಿತ್ರವನ್ನು  ಥೇಟರಿನಲ್ಲಿ ವೀಕ್ಷಿಸಬೇಕು.
 
ನಿರ್ದೇಶಕ ಮಂಜು ಕವಿ  ಪ್ರಥಮ ಪ್ರಯತ್ನದಲ್ಲೇ ಉತ್ತಮ  ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಗೆಳೆತನ, ಬಾಂಧವ್ಯ, ಪ್ರೀತಿಯ ಬೆಸುಗೆಯನ್ನು ಅಚ್ಚುಕಟ್ಟಾಗಿ ತೋರಿಸಿ, ನಾಯಕ ದುಷ್ಟರಿಗೆ ತಕ್ಕ ಪಾಠ ಕಲಿಸುವಂತಹ ಕಥೆಯನ್ನು ತೆರೆ ಮೇಲೆ ತಂದಿದ್ದಾರೆ.
ನಾಯಕನಾಗಿ ಅಭಿನಯಿಸಿರುವ ಆರ್ಯನ್ ಸೂರ್ಯ ಪ್ರತಿಭೆ, ತನ್ನ ಲುಕ್ ಹಾಗೂ ಗತ್ತಿನ ಮೂಲಕ ಗಮನ ಸೆಳೆಯುತ್ತಾರೆ.  ನಾಯಕಿ  ಕಾಶಿಮಾ ರಫಿ ತೆರೆಮೇಲೆ  ಮುದ್ದಾಗಿ  ಕಾಣಿಸಿದ್ದಾರೆ. ತನ್ನ ಮಾತಿನ ಮೂಲಕ ಎಲ್ಲರ ಗಮನ ಸೆಳೆಯುತ್ತಾ ಹಾಡೊಂದರಲ್ಲಿ ಮೈಚಳಿ ಬಿಟ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಎಂದಿನಂತೆ ತಬಲ ನಾಣಿ  ನಾಯಕನ ತಂದೆಯ ಪಾತ್ರದಲ್ಲಿ ನಗೆ ಚಟಾಕಿ ಹಾರಿಸಿದ್ದಾರೆ. ನಾಯಕನ ಗೆಳೆಯರಾಗಿ ಮೂಗನ ಪಾತ್ರದಲ್ಲಿ ಮಜಾ ಟಾಕೀಸ್ ಪವನ್ ಹಾಗೂ ಪತ್ರಕರ್ತ ಧನು ಯಲಗಚ್  ಪಾತ್ರಕ್ಕೆ ಜೀವ ತುಂಬಿದ್ದಾರೆ. ಊರ ಗೌಡನಾಗಿ ಬಲ ರಾಜ್ ವಾಡಿ ವಿಭಿನ್ನ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆರ್.ಹರಿಬಾಬು ಅವರ ಸಂಗೀತ ಸೊಗಸಾಗಿ ಮೂಡಿಬಂದಿದ್ದು,  ಆರ್. ಕೆ. ಶಿವಕುಮಾರ್ ಅವರ ಕ್ಯಾಮೆರಾ ಕೈಚಳಕ ಉತ್ತಮವಾಗಿ ಮೂಡಿ ಬಂದಿದೆ. ಒಟ್ಟಾರೆ ಇಡೀ ಫ್ಯಾಮಿಲಿ ಯಾವುದೇ ಮುಜುಗರವಿಲ್ಲದೆ ಕುಳಿತು ನೋಡುವಂಥ ಎಂಟರ್ ಟೈನರ್  ಚಿತ್ರ ಇದಾಗಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed